ಅಂತರ್ಜಲ ಚೇತನ ಯೋಜನೆ ಅನುಷ್ಠಾನಕ್ಕೆ ತಾಪಂ ಇಒ‌ ಟಿ.ಎಸ್.ಸಿದ್ದು ಸೂಚನೆ: ತಾಲ್ಲೂಕಿನಲ್ಲಿ 1820 ಸ್ಥಳ ಗುರುತು

Thursday, April 22, 2021

ಸರಗೂರು.22-ಅಂತರ್ಜಲ ಹೆಚ್ಚಿಸುವ ಸಲುವಾಗಿ ಮಹಾತ್ಮ ಗಾಂಧಿ-ನರೇಗಾ ಯೋಜನೆಯಡಿ ಸರ್ಕಾರ ಆರ್ಟ್ ಆಫ್ ಲಿವಿಂಗ್ ಸಹಯೋಗದಲ್ಲಿ ಅಂತರ್ಜಲ ಚೇತನ ಯೋಜನೆಯನ್ನು ಜಾರಿಗೊಳಿಸಿದ್ದು, ತಾಲ್ಲೂಕಿನಲ್ಲೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ತಾಪಂ ಇಒಟಿ.ಎಸ್.ಸಿದ್ದು ಸೂಚಿಸಿದರು.

ಸರಗೂರು ತಾಲೂಕು ಪಂಚಾಯತಿಯಲ್ಲಿ ಇಂದು ನಡೆದ ಪಿಡಿಓಗಳ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ರಾಜ್ಯದಲ್ಲಿ ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಸಲುವಾಗಿ ಪ್ರಾಯೋಗಿಕವಾಗಿ ಅಂತರ್ಜಲ ಚೇತನ ಯೋಜನೆಯನ್ನು ಒಂಬತ್ತು ಜಿಲ್ಲೆಗಳಲ್ಲಿ ಜಾರಿಗೊಳಿಸಿದೆ. ಇದರಲ್ಲಿ ಮೈಸೂರು ಜಿಲ್ಲೆಯೂ ಒಂದು. ಜಿಲ್ಲೆಯಲ್ಲಿ ಯೋಜನೆಗೆ ಸರಗೂರು ತಾಲೂಕು ಮತ್ತು ಎಚ್.ಡಿ.ಕೋಟೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಹೀಗಾಗಿ ತಾಲ್ಲೂಕಿನ ಪರಿಣಾಮಕಾರಿಯಾಗಿ ಯೋಜನೆಯನ್ನು ಜಾರಿಗೊಳಿಸಬೇಕೆಂದು ಪಿಡಿಓಗಳಿಗೆ ಸೂಚಿಸಿದರು.

ಯೋಜನೆಯಿಂದ ಅಂತರ್ಜಲ ವೃದ್ಧಿಸುವ ಜತೆಗೆ, ಬೋರ್ವೇಲ್ ಗಳು ರಿಚಾರ್ಜ್ ಆಗಲಿದೆ. ಯೋಜನೆ ಕೆಲಸ ಕಾರ್ಯಗಳು ಫೆಬ್ರವರಿ-ಮಾರ್ಚ್ನಲ್ಲಿಯೇ ಆರಂಭವಾಗಬೇಕಿದ್ದರೂ, ಇನ್ನೂ ಏಕೆ ಆರಂಭವಾಗಿಲ್ಲ ಎಂದು ಪ್ರಶ್ನಿಸಿದರು. ಯೋಜನೆಯ ತಾಲೂಕು ಸಂಯೋಜಕ ಕೆ.ಆರ್.ರಾಮಶೆಟ್ಟಿ  ಪ್ರತಿಕ್ರಿಯಿಸಿ, ಚುನಾವಣೆಯಿಂದ ತಡವಾಗಿದ್ದು, ಶೀಘ್ರವೇ ಕೆಲಸಗಳನ್ನು ಆರಂಭಿಸುವುದಾಗಿ ತಿಳಿಸಿದರು.

ಅಂರ್ತಜಾಲ ಚೇತನ ಯೋಜನೆಗೆ ತಾಲ್ಲೂಕಿನ 13 ಗ್ರಾಪಂ ವ್ಯಾಪ್ತಿಯಲ್ಲಿ 1820 ಸ್ಥಳಗಳನ್ನು ಗುರುತಿಸಲಾಗಿದೆ. ನಾಲಾ ಮತ್ತು ಹಳ್ಳಗಳು ಹರಿಯುವ ಸ್ಥಳಕ್ಕೆ ಅನುಗುಣವಾಗಿ ಸ್ಯಾಟಲೈಟ್ ಮೂಲಕಸ್ಥಳಗಳನ್ನು ಗುರುತು ಮಾಡಲಾಗಿದೆ. ಬೋಲ್ಡರ್ ಚೆಕ್ (ಕಲ್ಲು ತಡೆ) ಮತ್ತು ರಿಚಾರ್ಜ್ ವೇಲ್ ಗಳನ್ನು ನಿರ್ಮಿಸುವ ಮೂಲಕ ನೀರು ಇಂಗುವಂತೆ ಮಾಡಿ ಅಂತರ್ಜಲ ಸೆಲೆಗೆ ನೀರು ತುಂಬುವಂತೆ ಮಾಡಲಾಗುತ್ತದೆ. ಮೂಲಕ ಅಂತರ್ಜಾಲ ಹೆಚ್ಚಾಗುತ್ತದೆ ಎಂದು ಮಾಹಿತಿ ನೀಡಿದರು. ಈಗಾಗಲೇ ಯೋಜನೆ ಗದಗ, ತೀರ್ಥಹಳ್ಳಿ, ಪಾವಗಡ, ಕೋಲಾರ ಜಿಲ್ಲೆಯಲ್ಲಿ ಯಶಸ್ವಿಯಾಗಿದೆ ಎಂದರು.

ಸಭೆಯಲ್ಲಿ ಮಹಾತ್ಮ ಗಾಂಧಿ- ನರೇಗಾ ಯೋಜನೆ ತಾಲ್ಲೂಕು ಐಇಸಿ ಸಂಯೋಜಕ ಎಂ.ನಂಜುಂಡಸ್ವಾಮಿ ಮತ್ತು ತಾಲ್ಲೂಕಿನ ಪಿಡಿಓಗಳು ಭಾಗವಹಿಸಿದ್ದರು.

Share