ಅಪರಿಚಿತ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ : ಆರೋಪಿಗಳ ಬಂಧನ

Ravi K.

Thursday, February 18, 2021

ಕೆ.ಟಿ.ಸ್ಟ್ರೀಟ್ ನಲ್ಲಿ ಅಪರಿಚಿತ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆಗೈದ ವ್ಯಕ್ತಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. 16/02/2021 ರಂದು ಲಷ್ಕರ್ ಠಾಣಾ ಸಿಬ್ಬಂದಿಯವರಾದ ಮಹದೇವಯ್ಯ ಮತ್ತು ಧನಂಜಯ ಅವರುಗಳಿಗೆ 15/02/2021 ರಂದು ಲಷ್ಕರ್ ಠಾಣೆಯ ಬೀಟ್ ಕರ್ತವ್ಯಕ್ಕೆ ನೇಮಕ ಮಾಡಿದ್ದು, ಬಿ.ಎನ್ ಸ್ಟ್ರೀಟ್‍ನಲ್ಲಿ ಗಸ್ತಿನಲ್ಲಿದ್ದಾಗ ಪದಮ್ ಬ್ಯಾಂಗಲ್ಸ್ ಸ್ಟೋರ್ ಹತ್ತಿರ 3 ಮಂದಿ ಅಪರಿಚಿತರು ಕಂಡು ಓಡಿಹೋಗಿದ್ದು, ನಂತರ ಸುತ್ತಮುತ್ತ ಹುಡುಕಾಡುತ್ತಿದ್ದಾಗ ಒಬ್ಬಾತ ಮಲಗಿದ್ದಲ್ಲಿದ್ದ ಎದ್ದು ಓಡಿ ಹೋಗಿದ್ದು, ಸ್ಥಳಕ್ಕೆ ಹೋಗಿ ನೋಡಲಾಗಿ ಓರ್ವ ಹೆಂಗಸು ಬಿದ್ದಿದ್ದರು ಅವರಾಗಲೇ ಸತ್ತಿದ್ದರು.
ಮೇಲ್ನೋಟಕ್ಕೆ ಆಕೆಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿರುವುದು ಕಂಡು ಬಂದಿತ್ತು. ಅವರ ಹೆಸರು ವಿಳಾಸ ಇನ್ನೂ ತಿಳಿದು ಬಂದಿಲ್ಲ. ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ್ದ ದೂರಿನ ಮೇರೆಗೆ ಲಷ್ಕರ್ ಪೊಲೀಸ್ ಠಾಣೆಯ ಮೊ.ಸಂ 13/2021 ಕಲಂ 302, 376(ಡಿ) ರೆ/ವಿ 34 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿತ್ತು.
ಆರೋಪಿಗಳ ಪತ್ತೆಗಾಗಿ ಮೈಸೂರು ನಗರ ಶ್ವಾನದಳದ ಸಹಾಯ ಪಡೆದುಕೊಂಡಿದ್ದು, ಈ ಪ್ರಕರಣದಲ್ಲಿ ಶ್ವಾನದಳದ ಉಪಯೋಗವು ಆರೋಪಿಗಳ ಪತ್ತೆಯಲ್ಲಿ ಹೆಚ್ಚಿನ ಅನುಕೂಲವನ್ನುಂಟು ಮಾಡಿದೆ. ಆರೋಪಿಗಳ ಪತ್ತೆ ಬಗ್ಗೆ ಸಿಬ್ಬಂದಿಗಳ ವಿಶೇಷ ಪತ್ತೆ ತಂಡ ರಚಿಸಿ, ಬೇರೆ ಬೇರೆ ಕಡೆಗಳಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬಾತ್ಮೀದಾರರಿಂದ ಮಾಹಿತಿ ಪಡೆದು 16/02/21 ರಂದು ಹಿಡಿದು ಹಾಜರುಪಡಿಸಲಾಗಿದೆ. ರಪೀಕ್ ಅಹಮ್ಮದ್ @ ತಲ್ಲಾ, , ಮಂಜುನಾಥ ಆರ್. , ಮನು @ ಲೇಡಿಸ್, ರೇವಣ್ಣ @ ರೇವ , ಕೃಷ್ಣ ಎಂಬವರನ್ನು ಬಂಧಿಸಲಾಗಿದೆ. ಇವರು ಅಂಗಡಿಯ ಮುಂಭಾಗ ಮಲಗಿದ್ದ ಅಪರಿಚಿತ ಹೆಂಗಸಿನ ಮೇಲೆ ಅತ್ಯಾಚಾರ ಮಾಡಿ, ಕೊಲೆ ಮಾಡಿರುವುದಾಗಿ ಆರೋಪಿಗಳು ಹೇಳಿಕೆ ನೀಡಿದ್ದಾರೆ. ಇವರು ಕೂಲಿ ಕೆಲಸ, ಚಿಂದಿ ಆಯುವ ಕೆಲಸ ಮಾಡುವವರಾಗಿರುತ್ತಾರೆ. ಇದರಲ್ಲಿ ಪ್ರಮುಖ ಆರೋಪಿ ರಫೀಕ್ ಮಾತ್ರ ಮನೆಯಲ್ಲಿ ವಾಸ ಮಾಡುತ್ತಿದ್ದು, ಉಳಿದ ನಾಲ್ಕು ಜನರಿಗೂ ಯಾವುದೇ ಮನೆ ಇಲ್ಲದೆ, ಅಕ್ಕಿಚೌಕ ಮತ್ತು, ಮಂಡಿ ಕಡೆಗಳಲ್ಲಿ, ಅಂಗಡಿ ಮುಂದೆ ಮಲಗಿ ಜೀವನ ನಡೆಸುವವರಾಗಿರುತ್ತಾರೆ. ಈ ಪ್ರಕರಣದ ಪತ್ತೆ ಕಾರ್ಯವನ್ನು ಡಿಸಿಪಿ ಡಾ. ಎ. ಎನ್. ಪ್ರಕಾಶ್‍ಗೌಡ, ದೇವರಾಜ ವಿಭಾಗದ ಎ.ಸಿ.ಪಿ. ಶಶಿಧರ್ ಅವರುಗಳ ಮಾರ್ಗದರ್ಶನದಲ್ಲಿ ಕೈಗೊಂಡಿದ್ದು, ಲಷ್ಕರ್ ಪೊಲೀಸ್ ಠಾಣೆಯ ಪಿ.ಐ. ಸುರೇಶ್ ಕುಮಾರ್ ಎಸ್.ಡಿ ಮತ್ತು ದೇವರಾಜ ಪೊಲೀಸ್ ಠಾಣೆ ಪಿ.ಐ .ದಿವಾಕರ ಉಸ್ತುವಾರಿಯಲ್ಲಿ ಲಷ್ಕರ್ ಪೊಲೀಸ್ ಠಾಣೆಯ ಪಿ.ಎಸ್.ಐಗಳಾದ ಗೌತಮ್ ಗೌಡ, ಧನಲಕ್ಷಿ, ದೇವರಾಜ ಪೊಲೀಸ್ ಠಾಣೆಯ ಪಿ.ಎಸ್.ಐಗಳಾದ ರಾಜು, ಲೀಲಾವತಿ, ದೇವರಾಜ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ವಿರೇಶ್, ಸುರೇಶ್, ಉದಯಗಿರಿ ಪೊಲೀಸ್ ಠಾಣೆಯ ಸಿಬ್ಬಂದಿಯಾದ ಸಿದ್ದಿಖ್ ಹಾಗೂ ಲಷ್ಕರ್, ಉದಯಗಿರಿ, ದೇವರಾಜ ಪೊಲೀಸ್ ಠಾಣೆ ಸಿಬ್ಬಂದಿಗಳು ಪತ್ತೆ ಮಾಡಿರುತ್ತಾರೆ.
ರಾತ್ರಿ ಗಸ್ತು ಸಿಬ್ಬಂದಿಗಳು ಕೂಡಲೇ ದೇವರಾಜ ಠಾಣೆಯ ಪಿ.ಐ. ದಿವಾಕರ್, ಲಷ್ಕರ್ ಠಾಣೆಯ ಪಿ.ಐ. ಸುರೇಶ್ ಕುಮಾರ್, ಎಸಿಪಿ ಶಶಿಧರ್ ಮತ್ತು ಇತರ ಅಧಿಕಾರಿ ಮತ್ತು ಸಿಬ್ಬಂದಿಯವರುಗಳು ಸ್ಥಳಕ್ಕೆ ಭೇಟಿ ನೀಡಿ, ಅಗತ್ಯ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ, ಸ್ಥಳಕ್ಕೆ ಶ್ವಾನದಳ ಕರೆಸಿ ತಮ್ಮ ಕರ್ತವ್ಯ ಪ್ರಜ್ಞೆ ಮೆರೆದು ಸ್ಥಳಕ್ಕೆ ತೆರಳಿ ಕೂಡಲೇ ಮಾಹಿತಿಯನ್ನು ನಿಸ್ತಂತು ಕೊಠಡಿ & ಮೇಲಾಧಿಕಾರಿಗಳಿಗೆ ರವಾನಿಸಿರುತ್ತಾರೆ. ನಂತರ ಶ್ವಾನದಳದ ಕ್ಷಿಪ್ರ ಕಾರ್ಯಚರಣೆ ನಡೆಸಿ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಿ, ವೃತ್ತಿ ಪರತೆ ಮೆರೆದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಪೊಲೀಸ್ ಆಯುಕ್ತರು 10,000 ರೂ. ಬಹುಮಾನ ಘೋಷಣೆ ಮಾಡಿರುತ್ತಾರೆ.

Share