ಕಾಡಾನೆ ದಾಂಧಲೆಗೆ 15 ಲಕ್ಷ ರೂ. ಮೌಲ್ಯದ ಬೆಳೆ ನಾಶ

Ravi K.

Thursday, February 18, 2021

ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕಾಳೇತಿಮ್ಮನಹಳ್ಳಿ ಗ್ರಾಮದಲ್ಲಿ ಕಾಡಾನೆ ದಾಂಧಲೆಯಿಂದ 15 ಲಕ್ಷ ರೂ. ನಷ್ಟು ಬೆಳೆ ನಾಶವಾಗಿದೆ. ರೈತ ಮಹಿಳೆ ಸೀತಮ್ಮ ಅವರ ಜಮೀನಿಗೆ ನುಗ್ಗಿದ ಕಾಡಾನೆ ಬೆಳೆಯನ್ನು ಸಂಪೂರ್ಣ ನಾಶಪಡಿಸಿದೆ. ಆನೆದಾಳಿಯಿಂದ ಮೂರು ಎಕರೆ ಬಾಳೆ, ಎರಡು ಎಕರೆ ಗೆಣಸು, 200 ತೆಂಗಿನ ಮರ, 200 ಅಡಿಕೆ ಮರ ನಾಶವಾಗಿದ್ದು, ಸುಮಾರು 15 ಲಕ್ಷ ರೂ. ನಷ್ಟು ಬೆಳೆ ನಾಶವಾಗಿದೆ ಎಂದು ತಿಳಿದು ಬಂದಿದೆ.
ಪ್ರತಿ ಬಾರಿಯೂ ಆನೆಗಳು ದಾಳಿ ನಡೆಸಿ ಬೆಳೆ ನಾಶ ಮಾಡುತ್ತಿರುವ ಕುರಿತು ರೈತರು ಬೇಸತ್ತಿದ್ದಾರೆ. ಮುತ್ತೂರು ಅರಣ್ಯ ವಲಯದಿಂದ ಆನೆಗಳು ಬರುತ್ತಿದ್ದು, ಆ ಭಾಗದಲ್ಲಿ ತಡೆಗೋಡೆ ಸಮರ್ಪಕವಾಗಿಲ್ಲ. ಅದನ್ನು ದುರಸ್ತಿ ಮಾಡುವಂತೆ ರೈತರು ಮನವಿ ಮಾಡಿದ್ದಾರೆ. ಬೆಳೆ ನಷ್ಟಕ್ಕೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

Share