ಕೃಷಿ ಮಸೂದೆ ವಿರೋಧಿಸಿ ಮೈಸೂರಿನಲ್ಲಿ ರೈತ ಮುಖಂಡರಿಂದ ರೈಲು ತಡೆ ಚಳುವಳಿ

Ravi K.

Thursday, February 18, 2021

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಮಸೂದೆ ವಿರೋಧಿಸಿ ಇಂದು ರೈತ ಮುಖಂಡರು ರಾಜ್ಯಾದ್ಯಂತ ರೈಲು ತಡೆ ಚಳುವಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಮೈಸೂರಿನ ರೈಲ್ವೆ ನಿಲ್ದಾಣದಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.
ನಗರದ ರೈಲ್ವೆ ನಿಲ್ದಾಣದ ಮುಂಭಾಗದ ರಸ್ತೆಗಳಲ್ಲಿ ಪೊಲೀಸರ ಅಲರ್ಟ್ ಆಗಿದ್ದಾರೆ. ರೈಲ್ವೆ ನಿಲ್ದಾಣದ ಹೆಬ್ಬಾಗಿಲಿಗೆ ಪೊಲೀಸರು ಬ್ಯಾರಿಕೇಡ್ ಹಾಕಿದ್ದಾರೆ. ಒಂದು ಕೆಎಸ್ಆರ್ ಪಿ ತುಕಡಿ ಹಾಗೂ ಮೂರು ಸಿಎಆರ್ ತುಕಡಿ ನಿಯೋಜನೆ ಮಾಡಲಾಗಿದೆ. ಸ್ಥಳದಲ್ಲಿ ನಾಲ್ಕು ಕೆಎಸ್ ಆರ್ ಟಿಸಿ ಬಸ್ ಗಳನ್ನು ಇರಿಸಲಾಗಿದೆ. 12ಗಂಟೆಯಿಂದ ರೈಲ್ವೆ ತಡೆ ಚಳುವಳಿ ಆರಂಭವಾಗಿದ್ದು, ರೈಲ್ವೆ ನಿಲ್ದಾಣದ ಬಳಿ ಆಗಮಿಸುತ್ತಿರುವ ರೈತ ಮುಖಂಡರು ಮತ್ತು ಕಾರ್ಯಕರ್ತರನ್ನು ಪೊಲೀಸರು ತಡೆದಿದ್ದಾರೆ.
ಮೈಸೂರಿನಲ್ಲಿ ರೈತ ಸಂಘಟನೆಯಿಂದ ಪ್ರತಿಭಟನೆ ಆರಂಭವಾಗಿದ್ದು, ರೈಲು ತಡೆಯಲು ಮುಖಂಡರಿಗೆ ಪೊಲೀಸರು ಅವಕಾಶ ನೀಡಿಲ್ಲ. ಇದರಿಂದ ರೈಲು ನಿಲ್ದಾಣದ ಮುಂಭಾಗವೇ ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರತಿಭಟನಾಕಾರರು ರೈಲು ನಿಲ್ದಾಣದ ಒಳಗೆ ಬಿಡಲು ಪೊಲೀಸರಿಗೆ 5 ನಿಮಿಷದ ಕಾಲಾವಕಾಶ ನೀಡಿದ್ದರು.
ಒಳಗೆ ಬಿಡದಿದ್ರೆ ಏನಾಗುತ್ತೆ ಗೊತ್ತಿಲ್ಲ ಎಂಬ ಎಚ್ಚರಿಕೆ ಕೂಡ ನೀಡಿದರು. ರೈತ, ದಲಿತ ಕಾರ್ಮಿಕ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಯುತ್ತಿದ್ದು, ಪ್ರತಿಭಟನೆಯ ನೇತೃತ್ವವನ್ನು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ರಾಜ್ಯ ಸಂಘಟನೆ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜು ವಹಿಸಿಕೊಂಡಿದ್ದಾರೆ.
ಹಳ್ಳಿಕೆರೆಹುಂಡಿ ಭಾಗ್ಯರಾಜು, ದಲಿತ ಮುಖಂಡರಾದ ಬನ್ನಹಳ್ಳಿ ಸೋಮಣ್ಣ ಅವರ ನೇತೃತ್ವದಲ್ಲಿ ಸುಮಾರು 50 ರಿಂದ 60 ಮಂದಿ ಸೇರಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಮಸೂದೆಗಳನ್ನು ವಾಪಸ್ ಪಡೆಯಬೇಕೆಂದು ದೆಹಲಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಕರೆ ಕಟ್ಟಿರುವ ರೈಲು ರೊಕೊ ಚಳುವಳಿಗೆ ಬೆಂಬಲ ಸೂಚಿಸಿ ರೈಲು ನಿಲ್ದಾಣದ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದಾರೆ.

Share