ಕೋವಿಡ್ -19 ನಿಯಂತ್ರಣದ ಸಂಬಂಧ ಸರ್ಕಾರದ ನಿಯಮಗಳ ಉಲ್ಲಂಘನೆ: ಪ್ರಕರಣ ದಾಖಲು

Thursday, April 22, 2021

ಮೈಸೂರು.22:- ಕೋವಿಡ್-19 ಹರಡುವಿಕೆಯ 2ನೇ ಅಲೆಯ ಹಿನ್ನಲೆಯಲ್ಲಿ ಸರ್ಕಾರವು ಕಟ್ಟುನಿಟ್ಟಿನ ನಿಯಮಗಳನ್ನು ಹೊರಡಿಸಿದ್ದು, ಇವುಗಳ ಜಾರಿ ಸಂಬಂಧ ಮೈಸೂರು ನಗರ ಪೊಲೀಸರು ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಂಡಿದೆ.

21.04.2021 ರಂದು ಮೈಸೂರು ನಗರದ ಪೊಲೀಸರು ನಗರದ ವಿವಿಧ ಸ್ಥಳಗಳಲ್ಲಿ ಪರಿಶೀಲನೆ ಕೈಗೊಂಡಿದ್ದು, ಸಾಮಾಜಿಕ ಅಂತರವಿಲ್ಲದೆ. ಮಾಸ್ಕ್ ಧರಿಸದೆ ಇರುವ ಸಾರ್ವಜನಿಕರು/ಗ್ರಾಹಕರೊಂದಿಗೆ ವ್ಯಾಪಾರ/ವ್ಯವಹಾರ/ಸಮಾರಂಭ/ಕಾರ್ಯಕ್ರಮ ನಡೆಸುವ ಮೂಲಕ ಕೋವಿಡ್-19 ನಿಯಮಗಳನ್ನು ಉಲ್ಲಂಘನೆ ಮಾಡಿರುವವರ ವಿರುದ್ದ ಭಾರತೀಯ ದಂಡ ಸಂಹಿತೆ (.ಪಿ.ಸಿ) ಹಾಗೂ The Disaster Management act 2005 ಅಡಿಯಲ್ಲಿ  ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲಾಗಿದೆ.

ದೇವರಾಜ ಪೊಲೀಸ್ ಠಾಣಾ ವ್ಯಾಪ್ತಿಯ ದೇವರಾಜ ಮಾರ್ಕೆಟ್, ಕೆ ಆರ್ ವೃತ್ತದ ಬಳಿ ಇರುವ ಎನ್ ನಾಗರಾಜ್ ಶೆಟ್ಟಿ ಸನ್ಸ್ ಹಾಗೂ ನಾಗೇಂದ್ರ ಜ್ಯುವೆಲ್ಲರಿ ಹಾಲ್ ಒಡವೆ ಅಂಗಡಿಯ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಲಷ್ಕರ್ ಪೊಲೀಸ್ ಠಾಣಾ ವ್ಯಾಪ್ತಿಯ ಕೆ ಆರ್ ಹೆಚ್ ರಸ್ತೆಯಲ್ಲಿರುವ ಗೌತಮ್ ಟೆಲಿಕಾಂ ಅಂಗಡಿಯ ಮಾಲೀಕ ಗೌತಮ್ ರಾಜ್ರವರ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಕೃಷ್ಣರಾಜ ಪೊಲೀಸ್ ಠಾಣಾ ವ್ಯಾಪ್ತಿಯ ದೇವಿರಮ್ಮಣ್ಣಿ ಅಗ್ರಹಾರದಲ್ಲಿರುವ ಶ್ರೀ ರಾಜರಾಮ ಅಂಜನ ಪಟೇಲ್ ಸಂಘದ ಅಧ್ಯಕ್ಷರು ಹೀರಾರಾರಂ, ಉಪಾಧ್ಯಕ್ಷರಾದ ಮೋಟಾರಾಮ, ಸದಸ್ಯರಾದ ಬಾಲಾರಾಂ ಹಾಗೂ ಇತರರ ವಿರುದ್ದ ಪ್ರಕರಣ ದಾಖಲಿಸಲಾಗಿದೆ.

ಕೋವಿಡ್-19 ನಿಯಮಗಳ ಜಾರಿ ಸಂಬಂಧ ನಗರ ಪೊಲೀಸರು ಇದೇ ರೀತಿ ಪ್ರತಿ ದಿನ ಸಾರ್ವಜನಿಕರು ಹೆಚ್ಚು ಸೇರುವ ಸ್ಥಳಗಳ ಕಡೆ ಭೇಟಿ ನೀಡಿ ಪರಿಶೀಲಿಸಿ ನಿಯಮ ಉಲ್ಲಂಘನೆ ಮಾಡುವವರ ವಿರುದ್ದ ಪ್ರಕರಣಗಳನ್ನು ದಾಖಲಿಸಲಿದ್ದು, ಮಾಸ್ಕ್ ಧರಿಸದೇ ಇರುವ ಸಾರ್ವಜನಿಕರಿಗೆ ಸ್ಥಳದಂಡವನ್ನು ವಿಧಿಸಲಾಗುವುದು ಎಂದು ನಗರದ ಪೊಲೀಸ್ ಆಯುಕ್ತರಾದ ಡಾ. ಚಂದ್ರಗುಪ್ತ ತಿಳಿಸಿದ್ದಾರೆ.

Share