ತಾನು ಸೋತು ಸೇಡಿನಿಂದ ಸಿದ್ದರಾಮಯ್ಯ ನನ್ನ ಸೋಲಿಸಿದ್ರು: ಎಚ್‌.ಡಿ.ದೇವೇಗೌಡ ಬೇಸರ

Monday, September 27, 2021

 ಮೈಸೂರಿನಲ್ಲಿ ತಾನು ಸೋತ ಸೇಡಿಗೆ ಸಿದ್ದರಾಮಯ್ಯ ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ಸೋಲಿಸಿದರು ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಬೇಸರ ವ್ಯಕ್ತಪಡಿಸಿದರು.

ಜೆಡಿಎಸ್‌ ಕಾರ್ಯಕಾರಿಣಿ ಸಭೆಯಲ್ಲಿ ಸೋಮವಾರ ಮಾತನಾಡಿದ ಅವರು, ನಮ್ಮವರಿಂದ ನನಗೆ ಸೋಲಾಗಲಿಲ್ಲ. ಜಿ.ಟಿ.ದೇವೇಗೌಡರ ವಿರುದ್ಧ ಮೈಸೂರಿನಲ್ಲಿ ಸೋತು, ಆ ಸೇಡನ್ನು ನನ್ನ ಮೇಲೆ ಸಿದ್ದರಾಮಯ್ಯ ತೀರಿಸಿಕೊಂಡರು. ರಾಜ್ಯದ ಜನತೆ ಮುಂದೆ ಸಿದ್ದರಾಮಯ್ಯ ವ್ಯಕ್ತಿಯಲ್ಲ ಶಕ್ತಿ ಎಂದು ಸಾರಿ ಹೇಳಿದ್ದೆ. ಅಂತಹ ಸಿದ್ದರಾಮಯ್ಯ ಚುನಾವಣೆಯಲ್ಲಿ ನನ್ನ ಸೋಲಿಗೆ ಕಾರಣರಾದರು ಎಂದು ಟೀಕಿಸಿದರು.

ಅವರ ಮಗ ಸತ್ತ ಮಾರನೇ ದಿನ ಸಿದ್ದರಾಮಯ್ಯ ಮನೆಗೆ ಹೋಗಿದ್ದೆ ಎಂದು ಮಾತನಾಡಿದರು.

ಬಿಜೆಪಿಯದ್ದು ಧರಿದ್ರ ಸರ್ಕಾರ. ಅದನ್ನು ಅಧಿಕಾರಕ್ಕೆ ತಂದವರು ಯಾರು ಎಂದು ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಸೋನಿಯಾ ಗಾಂಧಿ ಅವರು ಮನಮೋಹನ್‌ ಸಿಂಗ್‌ ಅವರನ್ನು ಪ್ರಧಾನಿ ಮಾಡಿ 10 ವರ್ಷ ಆಳ್ವಿಕೆ ಮಾಡಿದರು. ಈಗ ಅಲ್ಲಿ ಎಷ್ಟು ಮಂದಿ ಇದ್ದಾರೆ? ಐದು ಜನ ರಾಜ್ಯಸಭೆಯಲ್ಲಿದ್ದಾರೆ, ನಾಲ್ಕು ಜನ ಲೋಕಸಭೆಯಲ್ಲಿದ್ದಾರೆ. ಮೂರು ಜನ ಮುಖ್ಯಮಂತ್ರಿಗಳಿದ್ದಾರೆ. ಪಕ್ಷ ಉಳಿಸಿಕೊಳ್ಳಲು ಎಷ್ಟು ಹೋರಾಟ ಮಾಡಿದರು ಎಂದು ಹೇಳಿದರು.

ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದೇನೆ. ಯಾವ ಹೋರಾಟಕ್ಕೆ ನೀವು ಅಣಿಯಾಗುತ್ತಿದ್ದೀರೋ ಅದಕ್ಕೆ ನಾವೂ ಬೆಂಬಲ ನೀಡುತ್ತೇವೆ. ಮೇಕೆದಾಟು ಹೋರಾಟಕ್ಕೆ ಬಂದು ನಿಮ್ಮೊಂದಿಗೆ ಪಾದಯಾತ್ರೆ ಮಾಡುತ್ತೇನೆ ಎಂದು ತಿಳಿಸಿದರು.

Share