ನಾಳೆ ರೋಟರಿ ಹಾಗೂ ಇನ್ನರ್ ವೀಲ್ ಸಂಸ್ಥೆಯಿಂದ 'ಹದಿನಾರು ಕೆರೆ' ಸ್ವಚ್ಛತೆ

Ravi K.

Wednesday, March 24, 2021

ದೇಶಿ ಹಾಗೂ ವಿದೇಶಿ ಹಕ್ಕಿಗಳನ್ನು ಆಕರ್ಷಿಸುವ ನಂಜನಗೂಡು ತಾಲೂಕು 'ಹದಿನಾರು ಕೆರೆ' ಸ್ವಚ್ಛತೆಗೆ ರೋಟರಿ ಹಾಗೂ ಇನ್ನರ್ ವೀಲ್ ಸಂಸ್ಥೆಯು ಮುಂದಾಗಿದ್ದು ನಾಳೆ ಅಂದರೆ ಮಾ.25ರಂದು ಕಾರ್ಯಕ್ರಮ ನಿಗದಿಯಾಗಿದೆ.
ರೋಟರಿ ಮೈಸೂರು ಸೌತ್ ಈಸ್ಟ್ ಸಂಸ್ಥೆ ಹಾಗೂ ಅದರ ಅಂಗಸಂಸ್ಥೆ ಗಳಾದ ಇನ್ನರ್ ವೀಲ್ ಕ್ಲಬ್ ಮತ್ತು ರೋಟರಾಕ್ಟ್ ಕ್ಲಬ್ ಹಾಗೂ ಇಂಟರಾಕ್ಟ್ ಕ್ಲಬ್ ಇವರು ಹದಿನಾರು ಗ್ರಾಮ, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಗ್ರಾಮ ಪಂಚಾಯತ್ ಹಾಗೂ ರಾಷ್ಟ್ರೀಯ ಸೇವಾ ಯೋಜನೆ, ಸರ್ಕಾರಿ ಪ್ರೌಢ ಶಾಲೆ ಹದಿನಾರು ಇವರೆಲ್ಲರ ಸಹಯೋಗದಲ್ಲಿ ಹದಿನಾರು ಕೆರೆಯ ಸುತ್ತ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ ಎಂದು ರೋಟರಿ ಮೈಸೂರ್ ಸೌತ್ ಈಸ್ಟ್‌ನ ಅಧ್ಯಕ್ಷ ರೋ. ರಾಜೀವ್ ಹಾಗೂ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಹಾಗೂ ರೋಟರಿ ಸದಸ್ಯೆ ಶುಭಾ ಮುರಳೀಧರ್ ತಿಳಿಸಿದ್ದಾರೆ.
ಇದರೊಂದಿಗೆ ರೋಟರಿ ಮೈಸೂರು ಸೌತ್ ಈಸ್ಟ್ ಸಂಸ್ಥೆಗೆ ಹೊಸದಾಗಿ ಸೇರ್ಪಡೆಗೊಂಡಿರುವ ಹದಿನಾರು ಗ್ರಾಮದ ರೋಟರಿ ಸಮುದಾಯ ದಳ(ಆರ್‌ಸಿಸಿ) ಸದಸ್ಯರೂ ಭಾಗವಹಿಸಲಿದ್ದಾರೆ. ಸ್ವಚ್ಛತಾ ಕಾರ್ಯಕ್ರಮದ ಜೊತೆಗೆ “ಹದಿನಾರು ಕೆರೆ”ಯಲ್ಲಿ ಪ್ರತಿವರ್ಷವೂ ಬರುವ ವಲಸೆ ಹಕ್ಕಿಗಳ ಬಗ್ಗೆ ಉಪಯುಕ್ತ ಮಾಹಿತಿಯನ್ನು ಮೈಸೂರಿನ ಪಕ್ಷಿ ತಜ್ಞ ಡಾ. ಅಭಿಜಿತ್ ಎಪಿಸಿ ನೀಡಲಿದ್ದಾರೆ. ಹದಿನಾರು ಗ್ರಾಮದ ಸಮುದಾಯ ಕೇಂದ್ರದಲ್ಲಿ ಸಭಾ ಕಾರ್ಯಕ್ರಮ ಆಯೋಜಿಸಲಾಗಿದೆ.
ಹದಿನಾರು ಕೆರೆ ಪಕ್ಷಿ ವೀಕ್ಷಣೆಯ ತಾಣವಾಗಿ ರೂಪುಗೊಳಿಸಲು ಹದಿನಾರಿನ ‘”ನೇಚರ್ ಕ್ಲಬ್” ತಂಡ ಉತ್ಸುಕವಾಗಿದೆ ಎಂದು ತಂಡದವರಾದ ಡಾ. ರವೀಂದ್ರ ಅವರು ನಂಜನಗೂಡು ತಹಶೀಲ್ದಾರ್ ಮೋಹನ ಕುಮಾರಿ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ತಿಳಿಸಿದರು.
ರೋಟರಿ ಮೈಸೂರ್ ಸೌತ್ ಈಸ್ಟ್‌ನ ಆರ್‌ಸಿಸಿ ಕೋ-ಆರ್ಡಿನೇಟರ ಮುರಳೀಧರ್ ವೈ.ವಿ ಹಾಗೂ ಇನ್ನರ್ ವೀಲ್ ಸಂಸ್ಥೆಯ ಪರವಾಗಿ ಅಧ್ಯಕ್ಷೆ ಶುಭಾ ಮುರಳೀಧರ್ ಅವರು ಕ್ಲಬ್ ಮಾ. 25 ರ ಗುರುವಾರ ನಡೆಸಲು ಉದ್ದೇಶಿಸಿದ ಕಾರ್ಯಕ್ರಮದ ಬಗ್ಗೆ ವಿವರಿಸಿದರು. ಕೆರೆಯನ್ನು ವೀಕ್ಷಿಸಿದ ತಹಶೀಲ್ದಾರ್ ಮೋಹನ ಕುಮಾರಿ ಅವರು ಈ ಕಾಯಕ್ರಮದಲ್ಲಿ ಗ್ರಾಮ, ತಾಲೂಕು ಹಾಗೂ ಜಿಲ್ಲಾ ಪಂಚಾಯತಿಗಳು ಸೇರಿ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸುವುದಾಗಿ ತಿಳಿಸಿದರು.

Share