ಪ್ರೆಗ್ನೆನ್ಸಿ ಬೈಬಲ್: ಬಾಲಿವುಡ್ ನಟಿ ಕರೀನಾ ಕಪೂರ್ ವಿರುದ್ಧ ದೂರು ದಾಖಲು

Thursday, July 15, 2021

ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ತಮ್ಮ ಗರ್ಭಾವಸ್ತೆಯಲ್ಲಿನ ದೈಹಿಕ ಮತ್ತು ಮಾನಸಿಕ ತೊಳಲಾಟಗಳ ಕುರಿತಾಗಿ ನಟಿ ಕರೀನಾ ಕಪೂರ್ ಖಾನ್ ಪುಸ್ತಕವನ್ನು ಬರೆದಿದ್ದರು. ಆ ಪುಸ್ತಕಕ್ಕೆ 'ಪ್ರೆಗ್ನೆನ್ಸಿ ಬೈಬಲ್' ಎಂದು ಹೆಸರಿಟ್ಟಿದ್ದರು.

'ಪ್ರೆಗ್ನೆನ್ಸಿ ಬೈಬಲ್' ಪುಸ್ತಕ ಕುರಿತು ಇತ್ತೀಚೆಗಷ್ಟೇ ಸೋಷಿಯಲ್ ಮೀಡಿಯಾದಲ್ಲಿ ಕರೀನಾ ಕಪೂರ್ ಖಾನ್ ಮಾತನಾಡಿದ್ದರು. ಇದೀಗ ಇದೇ ವಿಚಾರದ ಕುರಿತಾಗಿ ಕ್ರಿಶ್ಚಿಯನ್ ಗುಂಪು ಮಹಾರಾಷ್ಟ್ರದಲ್ಲಿ ದೂರು ನೀಡಿದೆ. ಪ್ರೆಗ್ನೆನ್ಸಿ ಬೈಬಲ್' ಬುಕ್ ಬರೆದ ಕರೀನಾ ಕಪೂರ್ ಖಾನ್, ಅದಿತಿ ಶಾ ಭೀಮ್‌ಜಾನಿ ಹಾಗೂ ಪುಸ್ತಕವನ್ನು ಪಬ್ಲಿಶ್ ಮಾಡಿದ ಜಗ್ಗರ್‌ನಾಟ್ ಬುಕ್ಸ್ ವಿರುದ್ಧ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಆಲ್ಫಾ ಒಮೇಗಾ ಕ್ರಿಶ್ಚಿಯನ್ ಮಹಾಸಂಘದ ಅಧ್ಯಕ್ಷ ಆಶೀಶ್ ಶಿಂಧೆ ದೂರು ನೀಡಿದ್ದಾರೆ.

ಶೀರ್ಷಿಕೆಯಲ್ಲಿ ಪವಿತ್ರವಾದ 'ಬೈಬಲ್' ಹೆಸರನ್ನು ಬಳಸಿರುವುದಕ್ಕೆ ನಮ್ಮ ಆಕ್ಷೇಪ ಇದೆ. ಇದರಿಂದ ಕ್ರಿಶ್ಚಿಯನ್‌ಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗುತ್ತದೆ'' ಎಂದು ಆಶೀಶ್ ಶಿಂಧೆ ಹೇಳಿದ್ದಾರೆ. ಐಪಿಸಿ ಸೆಕ್ಷನ್ 295-A ಅಡಿಯಲ್ಲಿ ಕರೀನಾ ಕಪೂರ್, ಅದಿತಿ ಶಾ ಭೀಮ್‌ಜಾನಿ ಮತ್ತು ಜಗ್ಗರ್‌ನಾಟ್ ಬುಕ್ಸ್ ವಿರುದ್ಧ ದೂರು ನೀಡಿದ್ದಾರೆ. ಆದರೆ, ಎಫ್‌ಐಆರ್ ದಾಖಲಾಗಿಲ್ಲ ಎಂದು  ಪೊಲೀಸರು ತಿಳಿಸಿದ್ದಾರೆ.

ನಾವು ದೂರನ್ನು ಸ್ವೀಕರಿಸಿದ್ದೇವೆ. ಆದರೆ, ಪ್ರಕರಣವನ್ನು ದಾಖಲು ಮಾಡಿಲ್ಲ. ಯಾಕೆಂದರೆ ಘಟನೆ ಇಲ್ಲಿ ನಡೆದಿಲ್ಲ. ಮುಂಬೈನಲ್ಲಿ ದೂರು ನೀಡುವಂತೆ ಸಲಹೆ ನೀಡಿದ್ದೇವೆ'' ಎಂದು ಶಿವಾಜಿನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸಾಯಿನಾಥ್ ತೊಂಬ್ರೆ ಹೇಳಿದ್ದಾರೆ.

Share