ಭಾರತದಲ್ಲಿ ಮೊದಲ ಬಾರಿಗೆ 3ಡಿ ಯಲ್ಲಿ ಬಿಡುಗಡೆಗೊಳ್ಳಲಿದೆ ಜೇಮ್ಸ್ ಬಾಂಡ್ ಚಿತ್ರ

Saturday, September 25, 2021

ವಿಶ್ವದಾದ್ಯಂತ ಜೇಮ್ಸ್ ಬಾಂಡ್ ಚಿತ್ರಗಳಿಗೆ ಅಭಿಮಾನಿ ಬಳಗ ಹೆಚ್ಚು ಎಂಬುದು ಜನಜನಿತ. ಈ ಸರಣಿಯಲ್ಲಿ ಈವರೆಗೆ 24 ಚಿತ್ರಗಳು ಬಿಡುಗಡೆಗೊಂಡು ಒಳ್ಳೆಯ ಯಶಸ್ಸು ಕಂಡಿವೆ. ಪ್ರಸ್ತುತ ಡೇನಿಯಲ್ ಕ್ರೇಗ್ ಪ್ರಧಾನ ಪಾತ್ರದಲ್ಲಿ ನಟಿಸಿದ 25ನೇ ಸಿನಿಮಾವಾಗಿ 'ನೋ ಟೈಮ್ ಟು ಡೈ' ಬಿಡುಗಡೆಗೆ ತಯಾರಿ ನಡೆಸಿದೆ. ಮೊದಲ ಬಾರಿಗೆ, ಭಾರತದಲ್ಲಿ ಬಾಂಡ್ ಚಲನಚಿತ್ರವನ್ನು 3ಡಿಯಲ್ಲಿ ಬಿಡುಗಡೆ ಮಾಡಲು ಸಿದ್ದತೆಗಳು ನಡೆಯುತ್ತಿವೆ.

ಕೊರೋನಾದ ಈ ಕಾಲದಲ್ಲಿ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರುತ್ತಾರೋ.. ಇಲ್ಲವೋ ಎಂಬ ಬಗ್ಗೆ ಎಲ್ಲರೂ ಸಂಶಯದಲ್ಲಿದ್ದಾರೆ. ಈ ಮಧ್ಯೆ ಬಿಡುಗಡೆಗೊಂಡ ಹಾಲಿವುಡ್ ಚಿತ್ರ 'ಶಾಂಗ್ ಚಿ': ದಿ ಲೆಜೆಂಡ್ ಆಫ್ ದಿ ಟೆನ್ ರಿಂಗ್ಸ್ ' ಭಾರತದಲ್ಲಿ ಕೂಡ ಉತ್ತಮ ಹಣ ಸಂಗ್ರಹಿಸಿದೆ. ಇದರೊಂದಿಗೆ, ಜೇಮ್ಸ್ ಬಾಂಡ್ ನ 'ನೋ ಟೈಮ್ ಟು ಡೈ' ದೊಡ್ಡ ಪ್ರಮಾಣದಲ್ಲಿ 1600ಕ್ಕೂ ಹೆಚ್ಚು ಥಿಯೇಟರ್‌ ಗಳಲ್ಲಿ ಸೆಪ್ಟೆಂಬರ್ 30 ರಂದು 2D, 3D ಯಲ್ಲಿ ಬಿಡುಗಡೆಗೊಳಿಸಲು ಮುಂದಾಗಿದ್ದಾರೆ. 

ತೆಲುಗು, ತಮಿಳು, ಹಿಂದಿ, ಕನ್ನಡ, ಇಂಗ್ಲಿಷ್‌ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಇದಕ್ಕೂ ಮೊದಲು "ಫಾಸ್ಟ್ ಅಂಡ್‌ ಫ್ಯೂರಿಯಸ್ 9" ನಂತಹ ಇತರ ಚಿತ್ರಗಳು ವಿಶ್ವಾದ್ಯಂತ 3D ಯಲ್ಲಿ ಬಿಡುಗಡೆಯಾಗಿದ್ದರೂ, ಇಲ್ಲಿ ಮಾತ್ರ 2D ಯಲ್ಲಿ ಬಿಡುಗಡೆಗೊಳಿಸಿದ್ದರು. ಈ ಬಾರಿ ಈ ಚಿತ್ರವನ್ನು 3D ಯಲ್ಲಿ ಬಿಡುಗಡೆ ಗೊಳಿಸುತ್ತಿರುವುದು ಒಂದು ವಿಶೇಷ.
ಆದರೆ, ಕಳೆದ ವರ್ಷ ಬಿಡುಗಡೆಯಾಗಬೇಕಿದ್ದ ಈ ಚಿತ್ರ ಕೋವಿಡ್ ಪರಿಸ್ಥಿತಿಯಿಂದ ವಿಳಂಬಗೊಳ್ಳುತ್ತಿದೆ.

ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟ್ರೇಲರ್ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಕ್ಯಾರಿ ಜೋಜಿ ನಿರ್ದೇಶನದ 'ನೋ ಟೈಮ್ ಟು ಡೈ' ಅಕ್ಟೋಬರ್ 8 ರಂದು ಅಮೆರಿಕಾದಲ್ಲಿ ಬಿಡುಗಡೆಯಾಗಲಿದೆ.

Share