ಮದ್ಯ ಮಾರಾಟ: ಷರತ್ತು ಪಾಲಿಸುವಂತೆ ಅಬಕಾರಿ ಆಯುಕ್ತರ ಸೂಚನೆ

Thursday, April 22, 2021

ಮೈಸೂರು, .22: - ಕೊರೊನಾ ಎರಡನೇ ಅಲೆಯನ್ನು ತಡೆಗಟ್ಟಲು .21ರಿಂದ ಮೇ 5 ವರೆಗೆ ರಾತ್ರಿ 9ರಿಂದ ಬೆಳಿಗ್ಗೆ 6 ಗಂಟೆವರೆಗೆ ಮದ್ಯ, ಬಿಯರ್, ವೈನ್ ಮಾರಾಟ ಮಾಡುವಾಗ ಹಲವು ಷರತ್ತುಗಳನ್ನು ಪಾಲಿಸುವಂತೆ ಅಬಕಾರಿ ಇಲಾಖೆ ಆಯುಕ್ತರು ಸೂಚಿಸಿದ್ದಾರೆ.

ಮದ್ಯ, ಬಿಯರ್, ವೈನ್ ಮಾರಾಟ ಮಾಡುವ ಎಲ್ಲ ರೀತಿಯ ಅಬಕಾರಿ ಸನ್ನದುಗಳ ಮುಚ್ಚುವ ಅವಧಿಯನ್ನು ರಾತ್ರಿ 9ಕ್ಕೆ ಸೀಮಿತಗೊಳಿಸಿದ್ದು, ಶುಕ್ರವಾರ ರಾತ್ರಿ 9ರಿಂದ ಸೋಮವಾರ ಬೆಳಿಗ್ಗೆ 6 ಗಂಟೆವರೆಗೆ ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿರುವ ಅವಧಿಯಲ್ಲಿ ಎಲ್ಲ ರೀತಿಯ ಅಂಗಡಿಗಳು ಮುಚ್ಚುವಂತೆ ತಿಳಿಸಲಾಗಿದೆ. ವೈನ್ ಬೋಟಿಕ್ ಸನ್ನದುಗಳಲ್ಲಿ ಹಾಲಿ ಇರುವಂತೆ ಸೀಲ್ಡ್ ಬಾಟಲ್ಗಳಲ್ಲಿ ಪಾರ್ಸೆಲ್ ರೂಪದಲ್ಲಿ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಬಾಟಲ್ ಬಿಯರ್, ವೈನ್ ಟ್ಯಾವರೀನ್ ಸನ್ನದಿನಿಂದ ಸೀಲ್ ಮಾಡಿರುವ ಬಾಟಲುಗಳನ್ನು ಮಾತ್ರ ನಿಗದಿಪಡಿಸಿರುವ ಎಂಆರ್ಪಿ ದರದಲ್ಲೇ ಪಾರ್ಸೆಲ್ ರೂಪದಲ್ಲಿ ಗ್ರಾಹಕರಿಗೆ ಮಾರಾಟ ಮಾಡಲು ಅನುಮತಿಸಲಾಗಿದೆ. ಮೈಕ್ರೋಬ್ರಿವರಿಗಳಲ್ಲಿ ತಯಾರಾಗುವ ಬಿಯರ್ ಗ್ಲಾಸ್, ಸೆರಾಮಿಕ್ ಅಥವಾ ಸ್ಟೈನ್ಲೆಸ್ ಸ್ಟೀಲ್ ಕಂಟೇನರ್ಗಳಲ್ಲಿ ಗರಿಷ್ಠ 2 ಲೀಟರ್ಗಳ ಮಿತಿಯವರೆಗೆ ಪಾರ್ಸೆಲ್ ನೀಡಬಹುದಾಗಿದೆ. ಯಾವುದೇ ಉಲ್ಲಂಘನೆ ಹಾಗೂ ದುರುಪಯೋಗವಾದಲ್ಲಿ ಸನ್ನದುದಾರರೇ ಜವಾಬ್ದಾರರಾಗುತ್ತಾರೆ. ಸನ್ನದುಗಳನ್ನು ಅಮಾನತುಗೊಳಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಬಕಾರಿ ಆಯುಕ್ತರು ತಿಳಿಸಿದ್ದಾರೆ.

Share