ಮೈಸೂರು ದಸರಾ: ಸಂಚಾರ ನಿಯಮದಲ್ಲಿ ಬದಲಾವಣೆ, ಟಫ್‌ ರೂಲ್ಸ್‌ ಜಾರಿ!

Sunday, October 3, 2021

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಆರಂಭಕ್ಕೆ ದಿನಗಣನೆ ಶುರುವಾಗಿದ್ದು, ದಸರಾ ವೇಳೆ ನಗರದಲ್ಲಿ ಸಂಚಾರ ನಿಯಮಗಳಲ್ಲಿ ಬದಲಾವಣೆ ಮಾಡಿ ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಆದೇಶ ಹೊರಡಿಸಿದ್ದಾರೆ.

ಅ.7 ರಿಂದ 15 ರವರೆಗೆ ಹೊಸ ಆದೇಶ ಜಾರಿ ಮಾಡಲಾಗಿದ್ದು, ನಗರದ ಸಂಚಾರ ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದೆ. ನಗರ ಹೃದಯಭಾಗದ ಹಲವು ಪ್ರದೇಶಗಳಲ್ಲಿ ವಾಹನಗಳ ನಿಲುಗಡೆಗೆ ನಿಷೇಧ ಹೇರಲಾಗಿದೆ.

ಅಂಬಾವಿಲಾಸ ಅರಮನೆ ಸುತ್ತಮುತ್ತ ಯಾವುದೇ ವಾಹನಗಳ ನಿಲುಗಡೆಗೆ ಅವಕಾಶವಿಲ್ಲ. ಸಯ್ಯಾಜಿರಾವ್ ರಸ್ತೆ, ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ, ಪುರಂದರ ರಸ್ತೆ ಬಿ.ರಾಚಯ್ಯ ವೃತ್ತ-ಬಿ.ಎನ್. ರಸ್ತೆ ಜಂಕ್ಷನ್, ಶಿವರಾತ್ರಿ ರಾಜೇಂದ್ರ ವೃತ್ತ-ಜಯಚಾಮರಾಜೇಂದ್ರ ವೃತ್ತ, ಆಲ್ಬರ್ಟ್ ವಿಕ್ಟರ್ ರಸ್ತೆಯ ಜಯಚಾಮರಾಜೇಂದ್ರ ವೃತ್ತ-ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತ, ಅಶೋಕ ರಸ್ತೆಯ ನೆಹರು ವೃತ್ತ-ಮಹಾವೀರ ವೃತ್ತ, ಅಶೋಕ ರಸ್ತೆಯ ಮಹಾವೀರ ವೃತ್ತ-ಜಯಚಾಮರಾಜ ವೃತ್ತ, ಬಲರಾಮ ದ್ವಾರದ ಮುಂಭಾಗ, ಡಾ. ರಾಜ್‌ಕುಮಾರ್‌ ವೃತ್ತ-ಬಿ.ಎನ್.ನರಸಿಂಹಮೂರ್ತಿ ವೃತ್ತ, ವಸ್ತು ಪ್ರರ್ದಶನದ ಮುಂಭಾಗದ ಟ್ಯಾಂಕ್ ಬಂಡ್ ರಸ್ತೆಯ ಬಿಎನ್ ರಸ್ತೆ ಜಂಕ್ಷ-ಮೃಗಾಲಯದ ರಸ್ತೆ, ಇಟ್ಟಿಗೆಗೂಡಿನ ಹೊಸ ಬೀದಿ 5ನೇ ತಿರುವು ರಸ್ತೆ ಮೃಗಾಲಯದ ವೃತ್ತ-ವಸ್ತು ಪ್ರರ್ದಶನದ ಪೂರ್ವ ದ್ವಾರ, ಮಾನಸರ ರಸ್ತೆಯ ವಾಣಿವಿಲಾಸ ರಸ್ತೆ ಜಂಕ್ಷನ್‌-ಲೋಕರಂಜನ್‌ ರಸ್ತೆ, ಮಲೆ ಮಹದೇಶ್ವರ ರಸ್ತೆಯ ಬಿ.ಎನ್.ರಸ್ತೆ ಜಂಕ್ಷನ್‌-(ಛತ್ರಿಮರ) ಚನ್ನಯ್ಯ ವೃತ್ತ, ಸರ್ಕಾರಿ ಭವನದ ರಸ್ತೆಯ ಸರ್ಕಾರಿ ಭವನದ ದ್ವಾರದ ರಾಜೇಂದ್ರ ಒಡೆಯರ್ ವೃತ್ತದವರೆಗೆ, ಸಂಪೂರ್ಣ ವಾಹನ ನಿಲುಗಡೆ ನಿಷೇಧಿಸಿ ಪೊಲೀಸ್ ಕಮಿಷನರ್ ಡಾ.ಚಂದ್ರಗುಪ್ತ ಆದೇಶ ಹೊರಡಿಸಿದ್ದಾರೆ. ಪ್ರತಿದಿನ ಸಾಯಂಕಾಲ 4 ರಿಂದ ರಾತ್ರಿ 12 ಗಂಟೆಯವರೆಗೆ ಈ ನಿಯಮ ಜಾರಿಯಲ್ಲಿರಲಿದೆ.

ಹಲವು ರಸ್ತೆಗಳಲ್ಲಿ ತಾತ್ಕಾಲಿಕ ಏಕಮುಖ ವಾಹನ ಸಂಚಾರ ವ್ಯವಸ್ಥೆ

ನಗರದಲ್ಲಿ ಹಲವು ರಸ್ತೆಗಳಲ್ಲಿ ತಾತ್ಕಾಲಿಕ ಏಕಮುಖ ವಾಹನ ಸಂಚಾರ ವ್ಯವಸ್ಥೆ ಮಾಡಲಾಗಿದೆ. ಅರಮನೆಯ ಸುತ್ತಲಿನ ರಸ್ತೆಗಳು, ಶಿವರಾತ್ರಿ ರಾಜೇಂದ್ರ ವೃತ್ತ, ಕುಸ್ತಿ ಅಖಾಡ ಜಂಕ್ಷನ್, ಬಿ.ಎನ್.ರಸ್ತೆ ಜಯಚಾಮರಾಜ ಒಡೆಯರ್ ವೃತ್ತ, ಆಲ್ಬರ್ಟ್ ಪಿಕ್ಚರ್ ರಸ್ತೆ, ಚಾಮರಾಜ ಒಡೆಯರ್‌ ವೃತ್ತ, ಆಲ್ಬರ್ಟ್ ವಿಕ್ಟರ್ ರಸ್ತೆ, ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತ, ನ್ಯೂ ಎಸ್.ಆರ್.ರಸ್ತೆ, ಬಸವೇಶ್ವರ ವೃತ್ತ, ಚಾಮರಾಜ ಜೋಡಿ ರಸ್ತೆ, ಶಿವರಾತ್ರಿ ರಾಜೇಂದ್ರ ವೃತ್ತ ಹಾಗೂ ಮೈಸೂರಿನ ಹಲವು ಪ್ರಮುಖ ರಸ್ತೆಗಳಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಮಾಡಲಾಗಿದೆ. ಪ್ರತಿದಿನ ಸಾಯಂಕಾಲ 4ರಿಂದ ರಾತ್ರಿ 10 ಗಂಟೆಯವರೆಗೆ ಏಕಮುಖ ಸಂಚಾರ ವ್ಯವಸ್ಥೆ ಇರಲಿದೆ.

Share