ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಯುವಕ ಅನುಮಾನಸ್ಪದ ಸಾವು

Ravi K.

Thursday, February 18, 2021

ಜಿಲ್ಲೆಯ ಹುಣಸೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಯುವಕನೊಬ್ಬ ಅನುಮಾನಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಆಸ್ಪತ್ರೆ ಎದುರಿನ ಬಡಾವಣೆಯ ಬಾಬುಲಾಲ್ ಜೈನ್ ರ ಪುತ್ರ ರಾಹುಲ್ ಜೈನ್ (21) ಸಾವನ್ನಪ್ಪಿದ ಯುವಕನಾಗಿದ್ದಾನೆ. ಈತನಿಗೆ ಮಂಗಳವಾರ ಮಧ್ಯರಾತ್ರಿ ಹೊಟ್ಟೆನೋವು ಕಾಣಿಸಿಕೊಂಡಿದ್ದು, ಸಹೊದರನೊಂದಿಗೆ ತೆರಳಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದ. ಆದರೆ, ಬುಧವಾರ ಬೆಳಗ್ಗೆ 9 ಗಂಟೆಯಾದರೂ ಏಳದಿದ್ದಾಗ ಮನೆಯವರು ಎದ್ದೇಳಿಸಲು ಹೋದ ವೇಳೆ ರಾಹುಲ್ ಸಾವನ್ನಪ್ಪಿದ್ದು ತಿಳಿದು ಬಂದಿದೆ.
ರಾಹುಲ್ ಗೆ ಆಸ್ಪತ್ರೆಯಲ್ಕಿ ಕರ್ತವ್ಯ ನಿರತ ವೈದ್ಯರ ಸೂಚನೆಯಂತೆ ಕೆಲ ಔಷಧ ಹಾಗೂ ಗ್ಲೂಕೋಸ್ ನೀಡಲಾಗಿತ್ತು. ಆಸ್ಪತ್ರೆಯಲ್ಲಿ ಸಿಗದ ಇಂಜಕ್ಷನ್ ನ್ನು ಮೆಡಿಕಲ್ಸ್ ನಲ್ಲಿ ಖರೀದಿಸಿ ನೀಡಲಾಗಿತ್ತು. ಆದರೆ, ಹುಷಾರಾಗುವ ಬದಲು ತಮ್ಮ ಮಗ ಮೃತಪಟ್ಟಿದ್ದು, ಸಾವಿನ ಬಗ್ಗೆ ಅನುಮಾನವಿದೆ ಎಂದು ನಗರ ಠಾಣೆಯಲ್ಲಿ ಬಾಬುಲಾಲ್ ಜೈನ್ ದೂರು ದಾಖಲಿಸಿದ್ದಾರೆ. ಘಟನೆಯಿಂದ ರೊಚ್ಚಿಗೆದ್ದ ಸಂಬಂಧಿಕರು ಮತ್ತು ಸ್ಥಳೀಯರು ಆಸ್ಪತ್ರೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

Share